Friday, November 28, 2008

ಜೀವನದ ಎಲ್ಲ ರಂಗಗಳಲ್ಲಿ ಕರ್ನಾಟಕದ ಸಾಧನೆ ಪಡೆದಿದೆ:ಡಾ|ಚನ್ನವೀರ ಕಣವಿ

ಕರ್ನಾಟಕದ ಸಂಸ್ಕೃತಿಯೆಂದರೆ ಅದು ಸಮನ್ವಯ ಸಾರುವ ಸಂಸ್ಕೃತಿ. ಇಹ ಪರಗಳಲ್ಲಿ, ಭಕ್ತಿ, eನ, ಕರ್ಮಗಳಲ್ಲಿ, ಹಳತು ಹೊಸತರಲ್ಲಿ, ಏಕ ಅನೇಕಗಳಲ್ಲಿ, ಅದು ಸಮನ್ವಯಗೊಂಡಿದೆ. ಒಮ್ಮೊಮ್ಮೆ ಒಳಿತು ಕೆಡುಕುಗಳಲ್ಲೂ ಸಮನ್ವಯ ಕಾಣುವ ದೌರ್ಬಲ್ಯವೂ ಅದರದ್ದಾಗಿದೆ ಎಂದು ಆಳ್ವಾಸ್ ನುಡಿಸಿರಿ ೨೦೦೮ ಸಮ್ಮೇಳನದ ಅಧ್ಯಕ್ಷ ನಾಡೋಜಾ ಡಾಚನ್ನವೀರ ಕಣವಿ ವಿಶ್ಲೇಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ ೨೦೦೮ರ ಮೊದಲನೆಯ ದಿನ ಸಮ್ಮೇಳನಾಧ್ಯಕ್ಷರ ಆಶಯ ಭಾಷಣ ಮಾಡಿದ ಡಾಚನ್ನವೀರ ಕಣವಿ, ಜೀವನದ ಎಲ್ಲ ರಂಗಗಳಲ್ಲಿ ಕರ್ನಾಟಕದ ಸಾಧನೆ ಸಾರ್ಥಕತೆಯನ್ನು ಪಡೆದಿದೆ. ಭಾರತೀಯ ಸಂಸ್ಕೃತಿಗೆ ತನ್ನದೇ ಕಾಣಿಕೆ ನೀಡಿದೆ. ಆಮೂಲಕ ಉಜ್ವಲ ಪರಂಪರೆ ಮುಂದುವರಿಸಿಕೊಂಡು ಬರಲು ಸಹಕಾರಿಯಾಗಿದೆ ಎಂದರು. ಶಾತವಾಹನರನ್ನು ಬಿಟ್ಟರೆ ಕರ್ನಾಟಕವನ್ನು ಅತ್ಯಂತ ಪ್ರಭಾವಶಾಲಿಯಾಗಿ ಆಳಿದ ಪ್ರಥಮ ರಾಜವಂಶ ಎಂಬ ಖ್ಯಾತಿ ಪಡೆದುಕೊಂಡಿರುವ ಕದಂಬ ವಂಶ ಕರ್ನಾಟಕದ ರಾಜಕೀಯಕ್ಕೆ ಔನ್ನತ್ಯ, ಪ್ರಜಾವಾತ್ಸಲ್ಯ, ಪರಮತ ಸಹಿಷ್ಣುತೆ ಮೊದಲಾದ ಶಾಶ್ವತ ಆದರ್ಶಗಳನ್ನು ಹಾಕಿಕೊಟ್ಟಿತು. ವಾಸ್ತುಶಿಲ್ಪ, ಶಿಲ್ಪಕಲೆಗೆ ಆಶ್ರಯವನ್ನಿತ್ತಿತಲ್ಲದೆ ಜನಜೀವನವನ್ನು ಹಸನುಗೊಳಿಸಲು ಪ್ರಯತ್ನಿಸಿತು. ಒಟ್ಟಿನಲ್ಲಿ ಕರ್ನಾಟಕದ ಗೌರವವನ್ನು ಎತ್ತಿಹಿಡಿದ ಅತ್ಯಂತ ಪ್ರಾಚೀನವಾದ ರಾಜವಂಶ ಕದಂಬರದು ಎಂದು ಡಾಕಣವಿ ಅವರು ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಉದಾಹರಿಸಿದರು. ಕನ್ನಡದ ಶಕ್ತಿ ಮತ್ತು ವ್ಯಾಪ್ತಿಯನ್ನು ಒಂದೇ ಕಡೆ ಗುರುತಿಸುವುದಾದರೆ ಅದು ಸರ್ವಜ್ಞನಲ್ಲಿ ಎಂದು ಅಭಿಪ್ರಾಯಪಟ್ಟ ಸಮ್ಮೇಳನಾಧ್ಯಕ್ಷರು, ಭಾಷಾ ಶಕ್ತಿಯಲ್ಲಿ ಅವನನ್ನು ಮೀರಿಸಿದವರು ವಿರಳ ಆತನ ಮಾತುಗಳು ನೇರವಾಗಿ ಜನಮನವನ್ನು ಮುಟ್ಟಿದವು, ತಟ್ಟಿ ಎಚ್ಚರಿಸಿದವು, ಚುಚ್ಚಿ ಎಬ್ಬಿಸಿದವು ಎಂದರು. ವಿವಿಧ ಶಾಸ್ತ್ರಗಳ ಪರಿಣತಿ ಆಳವಾದ ತತ್ವ ಚಿಂತನೆ ಹಾಗೂ ಆತನ ಅನುಭವ ಸರಳವಾದ ತ್ರಿಪದಿಗಳಲ್ಲಿ ಹೊರಹೊಮ್ಮಿತು. ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿತು. ಜನರ ಸಂಸ್ಕೃತಿಯನ್ನು ರೂಪಿಸಿತು. ಸದಾ ಸಂಚಾರ ಕೈಗೊಂಡ ಸರ್ವಜ್ಞ, ಮಹಾಂತ ಜಂಗಮ. ಅಪಾರವಾದ ಜೀವನಾನುಭವ, ಉದಾರವಾದ ಮಾನವೀಯ ಅನುಕಂಪೆ, ಉನ್ನತವಾದ ಆಧ್ಯಾತ್ಮಿಕ ನಿಲುವು, ಇವುಗಳಿಂದ ಮುಪ್ಪುರಿಗೊಂಡ ಜನತಾ ಪ್ರತಿಭೆ ಸರ್ವಜ್ಞನದು ಎಂದು ಡಾಕಣವಿ ಸರ್ವಜ್ಞನ ಸಾಹಿತ್ಯ ಹಾಗೂ ಶಕ್ತಿಯನ್ನು ವಿಶ್ಲೇಸಿದರು.ವಚನ ಸಾಹಿತ್ಯ, ದಾಸ ಸಾಹಿತ್ಯದ ಘಟ್ಟಗಳ ನಂತರ ಶರಣ ಮಾರ್ಗಾವಲಂಬಿಗಳಾದ ಅನುಭಾವಿಗಳು ರಚಿಸಿದ ತತ್ವಪದಗಳು ಜನಜೀವನವನ್ನು ಮುಟ್ಟಿ ಹಸನುಗೊಳಿಸಿದವು. ಇವು ಅನುಭಾವಿಗಳ ರೂಪಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ೧೯ನೇ ಶತಮಾನವನ್ನು ಕನ್ನಡ ಸಾಹಿತ್ಯದ ಬೀಳುಯುಗ ಎಂದು ಕರೆಯುವುದುಂಟು ಆದರೆ ಈ ಯುಗದಲ್ಲಿಯೇ ತತ್ವಪದಗಳ ಪರಂಪರೆ ಶ್ರೀಮಂತವಾಗಿ ಬೆಳೆತು ಎಂದು ಅವರು ಸಾಹಿತ್ಯವನ್ನು ಮತ್ತು ಅದು ಜನಜೀವನವನ್ನು ಪ್ರಭಾವಿಸಿದ ಬಗೆಯನ್ನು ಪ್ರಸ್ತಾವಿಸಿದರು. ೨೦ನೇ ಶತಮಾನದಲ್ಲಿ ತನ್ನ ಸುವರ್ಣ ಯುಗವನ್ನು ಕಂಡ ಕನ್ನಡ ಸಾಹಿತ್ಯ ೨೧ನೇ ಶತಮಾನದಲ್ಲಿ ಆಶಾದಾಯಕವಾಗಿ ಬೆಳೆಯಬಹುದು ಎಂಬ ಭರವಸೆಯನ್ನು ಡಾಕಣವಿ ವ್ಯಕ್ತಪಡಿಸಿದರು. ತಮ್ಮ ಭಾಷಣದುದ್ದಕ್ಕೂ ಅವರು ಪ್ರತಿಭೆ, ಶಕ್ತಿ, ಸಂಸ್ಕೃತಿ, ಸಾಹಸ ಮತ್ತು ಸಂಗೀತಗಳನ್ನು ಪ್ರಸ್ತಾವಿಸಿ ಕನ್ನಡ ಮನಸ್ಸು, ಶಕ್ತಿ ಮತ್ತು ವ್ಯಾಪ್ತಿಯ ಬಗ್ಗೆ ವಿವೇಚಿಸಿದರು. ಸಮಾರಂಭದಲ್ಲಿ ಕನ್ನಡ ಮನಸ್ಸು-ಸಾಹಿತಿಯ ಜವಾಬ್ದಾರಿ ಕೃತಿಯನ್ನು ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು. ನುಡಿಸಿರಿಯ ರೂವಾರಿ ಡಾಮೋಹನ್ ಆಳ್ವಾ ಅವರು ಉದ್ಘಾಟಕರಾದ ಡಾಕೆ.ಎಸ್. ನಿಸಾರ್ ಅಹಮದ್ ಮತ್ತು ಸಮ್ಮೇಳನಾಧ್ಯಕ್ಷ ಡಾಚನ್ನವೀರ ಕಣವಿ ಅವರನ್ನು ಸನ್ಮಾನಿಸಿದರು.
ಕನ್ನಡ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

No comments: