Saturday, November 29, 2008

ಶಿಲ್ಪಾ ಶೆಟ್ಟಿಯ ಗಂಧದ ಎಣ್ಣೆಯ ಜಾಹಿರಾತೂ, ರೈತನ ಸಾವುಗಳೂ......


ಶಿಲ್ಪಾ ಶೆಟ್ಟಿಯ ಗಂಧದ ಎಣ್ಣೆಯ ಜಾಹಿರಾತೂ, ರೈತನ ಸಾವುಗಳೂ......

ವರದಿ : ಮಿಥುನ ಕೊಡೆತ್ತೂರು.

ವಿದ್ಯಾಗಿರಿ: ಶಿಲ್ಪಾ ಶೆಟ್ಟಿಯ ಚಿತ್ರವಿದ್ದ ಗಂಧದ ಎಣ್ಣೆ ಬಿಡುಗಡೆಯಾದರೆ ಪುಟಗಟ್ಟಲೆ ಸುದ್ದಿ ಮಾಡುವ ಪತ್ರಿಕೆಗಳು ಕರ್ನಾಟಕದಲ್ಲಿ ಅದೇ ಗಂಧದ ಮರವನ್ನು ರೈತ ಸ್ವತಃ ನೀರೆರೆದು ಬೆಳೆಸಿದರೂ ಕಡಿಯಲು ಕಾನೂನಿನಲ್ಲಿ ಅವಕಾಶವಿಲ್ಲ ಅಂತ ಸುದ್ಧಿ ಮಾಡುವುದಿಲ್ಲ ಎಂದು ನರೇಂದ್ರ ರೈ ದೇರ್ಲ ಹೇಳಿದರು.
ಅವರು ನುಡಿಸಿರಿಯ ಮೂರನೆಯ ವಿಚಾರಗೋಷ್ಟಿಯಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ಮಾತನಾಡಿದರು.
ವಿದೇಶದಿಂದ ಬರುವ ಕೇರಳಿಗ ತನ್ನ ಮನೆಯನ್ನು ಹೊಕ್ಕುವ ಮುಂಚೆ ಮಲೆಯಾಳಿ ಪತ್ರಿಕೆಯ ಚಂದಾ ಹಣ ಕಟ್ಟುತ್ತಾನೆ. ಅಲ್ಲಿನ ಒಂದು ಪತ್ರಿಕೆಯ ಪ್ರಸಾರ ಸಂಖ್ಯೆ, ಕನ್ನಡದ ಅಷ್ಟೂ ಪತ್ರಿಕೆಗಳ ಪ್ರಸಾರ ಸಂಖ್ಯೆಗಿಂತಲೂ ಹೆಚ್ಚು. ನಮ್ಮಲ್ಲಿ ಮಾಂಸದಂಗಡಿ, ತರಕಾರಿ ಅಂಗಡಿ ಜಾಸ್ತಿಯಾದಂತೆ ಪುಸ್ತಕ ಪತ್ರಿಕೆ ಮಾರುವ ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಹೇಲಿದ ದೇರ್ಲ ಮಂಗಲೂರು ವಿವಿಯ ಕೊಂಚ ದೂರದಲ್ಲಿ ಹಾಜಬ್ಬನೆಂಬ ಕಿತ್ತಲೆ ಮಾರುವುದನ್ನು ಗುರುತಿಸುವ ಕಾರ್‍ಯವನ್ನು ಪತ್ರಿಕೆಗಳು ಮಾಡಿದ್ದನ್ನು ನೆನಪಿಸಲು ಮರೆಯಲಿಲ್ಲ.
ಕನ್ನಡ, ಪತ್ರಿಕೆ ಇಲ್ಲದ ಕರ್ನಾಟಕವನ್ನು ಯೋಚಿಸಲಿಕ್ಕಾಗದು.
ಬೋರ್ಡಿಟ್ಟುಕೊಳ್ಳದೆ, ಕಟ್ಟಿಗೆ ಸುಟ್ಟು ಅಕ್ಷರ ಕಟ್ಟಿದ ಚಿಮಿಣಿ ದೀಪದಲ್ಲಿ ಬರೆದು ಮುದ್ರಿಸಿದ ಮೌಲ್ಯ ಕೇಂದ್ರಿತ ಪತ್ರಿಕೆಗಳು ಸ್ವಾತಂತ್ರ್ಯೋತ್ತರದಲ್ಲಿದ್ದವು. ಈಗ ಪ್ರಸಾರ, ಜಾಹೀರಾತುಗಳ ಮಧ್ಯೆ ಎಲ್ಲೋ ಒಂದು ಕಡೆ ನೈತಿಕತೆ ತಪ್ಪಿತೋ ಏನೋ ಅಂತನಿಸುತ್ತದೆ. ಕೆಟ್ಟ ಪತ್ರಿಕೆಗಳನ್ನು ಓದಿದರೆ ನಮ್ಮ ಮನಸ್ಸೂ ಕೆಟ್ಟ ಚಿಂತನೆಗಳನ್ನು ಹುಟ್ಟಿಸುತ್ತದೆ ಎಂದು ಹೇಳಿದರು.
ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಮಾತನಾಡಿದ ದೀಪಕ್ ತಿಮ್ಮಯ್ಯ, ಸುದ್ದಿ ವಾಹಿನಿಗಳು ಇಲಿ ಹೋದ್ರೆ ಹುಲಿ ಹೋಯಿತೆಂಬಂತೆ ವೈಭವೀಕರಿಸುವುದು ಸರಿಯಲ್ಲ. ಆದರೆ ಜನ ನೋಡುವುದರಿಂದ ಸುದ್ದಿಗಳನ್ನೂ ಹಾಗೇ ನೀಡಲಾಗುತ್ತಿದೆ. ಹಿಂದೆ ರೇಡಿಯೋದಿಂದ ಭಾಷೆ ಕಲಿಯಬಹುದಿತ್ತು. ಆದರೆ ಟಿವಿಯಿಂದ ಭಾಷೆ ಕಲಿಯುವುದು ಸಾಧ್ಯವೇ? ಆದರೂ ಟಿವಿಯಿಂದ ಪ್ರಭಾವಿತರಾಗಿ ಕನ್ನಡ ಕಲಿಯಲು ಜನ ಮುಂದೆ ಬರುತ್ತಿರುವುದನ್ನು ಕಾಣಬಹುದು. ಬೆಂಗಳೂರು ಕನ್ನಡದ ದಬ್ಬಾಳಿಕೆ ಬೇಕೆ ಪ್ರಾದೇಶಿಕ ಕನ್ನಡದ ಮೇಲಾಗುತ್ತಿರುವುದನ್ನು ಟಿವಿಯಲ್ಲಿ ಕಾಣುತ್ತಿದ್ದೇವೆ. ಭಾಷಾ ಜಾತಿ ಪದ್ಧತಿ ಕಾಣಬಹುದು. ಕನ್ನಡಿಗರೇ ಕನ್ನಡದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೇವೆ ಅಂತ ಅನಿಸುತ್ತಿದೆ.
ಕೆಟ್ಟ ಧಾರಾವಾಹಿಗಳು ಬರುತ್ತಲೇ ಇವೆ, ಜನ ನೋಡುತ್ತಿರುವುದರಿಂದ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನೂ ಹಾಳಾಗಬಹುದು ಎಂದು ಹೇಳಿದರು.
ಕನ್ನಡದ ಮಧ್ಯೆ ಇಂಗ್ಲಿಷ್ ಭಾಷೆಯನ್ನು ಬಳಸುವುದು ಸರಿಯಲ್ಲ. ಮೊದಲು ಕೀಳರಿಮೆಯಿಂದ ಹೊರಬರಬೇಕು ಎಂದು ದೀಪಕ್ ಹೇಳಿದರು.
ಸಂಪತ್ ಉಜಿರೆ ಗೋಷ್ಟಿ ನಿರೂಪಿಸಿದರು.

No comments: